ನಿಜವಾದ ಜರ್ನಿ ಇನ್ನು ಆರಂಭವಾಗಬೇಕು
ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಸಿಗುವ ಸಿನಿಮಾಗಳಲ್ಲಿ "ತಾಜ್‌ಮಹಲ್' ಕೂಡಾ ಒಂದು. ಲವ್‌ಸ್ಟೋರಿಯಾಗಿ ಈ ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಆ ಸಿನಿಮಾ ಹಿಟ್ ಆಗುತ್ತಿದ್ದಂತೆ ಯಾರು ಆ ಸಿನಿಮಾದ ನಿರ್ದೇಶಕ ಎಂದು ಗಾಂಧಿನಗರ ಮಾತನಾಡುತ್ತಿದ್ದಾಗ ಬಂದ ಉತ್ತರ, "ಎಸ್.ನಾರಾಯಣ್ ಅವರ ಶಿಷ್ಯನಂತೆ'. ಹೀಗೆ ಎಸ್.ನಾರಾಯಣ್ ಶಿಷ್ಯ ಎಂದು ಗುರುತಿಸಿಕೊಂಡಿದ್ದ ಆ ನಿರ್ದೇಶಕ ಬೇರಾರು ಅಲ್ಲ, ಆರ್.ಚಂದ್ರು.
ಕನ್ನಡ ಚಿತ್ರರಂಗದ ಮುಖ್ಯವಾಹಿನಿಯ ನಿರ್ದೇಶಕರ ಪಟ್ಟಿಯಲ್ಲಿ ಇವತ್ತು ಆರ್.ಚಂದ್ರು ಹೆಸರು ಕೂಡಾ ಇದೆ. "ತಾಜ್ ಮಹಲ್' ಮೂಲಕ ಆರಂಭವಾದ ಚಂದ್ರು ಜರ್ನಿ ಈಗ 11ನೇ ಸಿನಿಮಾದವರೆಗೆ ಬಂದು ನಿಂತಿದೆ. ಸದ್ಯ ಚಂದ್ರು 10 ಸಿನಿಮಾಗಳನ್ನು ಪೂರೈಸಿ 11ನೇ ಸಿನಿಮಾದ ಮುಹೂರ್ತ ಮಾಡಿದ್ದಾರೆ. ಅಂದು ನಿರ್ಮಾಪಕರಿಗಾಗಿ ಹುಡುಕಾಡುತ್ತಿದ್ದಾಗ ಚಂದ್ರು, ಈಗ ಸ್ವತಃ ನಿರ್ಮಾಪಕರಾಗಿದ್ದಾರೆ.
ತಮ್ಮದೇ ಬ್ಯಾನರ್‌ನಲ್ಲಿ ನಾಲ್ಕು ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದಾರೆ. ಶಿಡ್ಲಘಟ್ಟದಿಂದ ಕೆಂಪು ಬಸ್ಸು ಹತ್ತಿಕೊಂಡು ಮೆಜೆಸ್ಟಿಕ್‌ಗೆ ಬಂದಿಳಿದ ಚಂದ್ರುಗೆ ಇಂದಿನ ತಮ್ಮ ಬೆಳವಣಿಗೆ ಬಗ್ಗೆ ಖುಷಿ ಇದೆ. "ಚಿತ್ರರಂಗಕ್ಕೆ ಬಂದು 10 ವರ್ಷ ದಾಟಿದೆ. 10 ಸಿನಿಮಾಗಳನ್ನು ಮಾಡಿದ್ದೇನೆ. ಹಿಂದಿರುಗಿ ನೋಡಿದಾಗ ಖುಷಿಯಾಗುತ್ತದೆ. ಶಿಡ್ಲಘಟ್ಟದಿಂದ ಬೆಂಗಳೂರಿಗೆ ಬಂದಿಳಿದಾಗ ನನ್ನ ಬಳಿ ಇದ್ದಿದ್ದು ಕನಸು ಅಷ್ಟೇ. ಮೆಜೆಸ್ಟಿಕ್‌ಗೆ ಬಂದಿಳಿದ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ಗೊತ್ತಿರಲಿಲ್ಲ.
ಅಂದು ಆಶ್ರಯ ಕೊಟ್ಟಿದ್ದು ಮೆಜೆಸ್ಟಿಕ್‌ನಲ್ಲಿರುವ ಶಿವಮೊಗ್ಗ ಪ್ಲಾಟ್‌ಫಾರಂ. ಶಿಡ್ಲಘಟ್ಟ ಕಡೆಯವರು ನಾನು ಮೆಜೆಸ್ಟಿಕ್‌ನಲ್ಲಿ ಅಡ್ಡಾಡುವುದನ್ನು ನೋಡಿದರೆ ಚೆನ್ನಾಗಿರೋದಿಲ್ಲ ಎಂದು ಅಂದು ಶಿವಮೊಗ್ಗ ಕಡೆ ಹೋಗುವ ಪ್ಲಾಟ್‌ಫಾರಂನಲ್ಲಿ ರಾತ್ರಿ ಕಳೆದಿದ್ದೆ. ನಾನು ಕೂಡಾ ಸಾಕಷ್ಟು ನೋವು, ಅವಮಾನವನ್ನು ಎದುರಿಸಿಯೇ ಮೇಲೆ ಬಂದವನು. ನನ್ನ ಬರೆಯೋ ಹುಚ್ಚು ಇವತ್ತು ಚಿತ್ರರಂಗದಲ್ಲಿ ಒಂದು ಸ್ಥಾನ ಕಲ್ಪಿಸಿದೆ.
ಇಷ್ಟು ದಿನದ ಜರ್ನಿ ಒಂದು ಪ್ಲಾಟ್‌ಫಾರಂ ಆದರೆ, ನಿಜವಾದ ಜರ್ನಿ ಇನ್ನು ಆರಂಭವಾಗಬೇಕು' ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಚಂದ್ರು. ಚಂದ್ರುಗೆ ತಾನು ಚಿತ್ರರಂಗದಲ್ಲಿ ಬೆಳೆಯುತ್ತೇನೆ ಎಂಬ ವಿಶ್ವಾಸಕ್ಕಿಂತ ಹೆಚ್ಚಾಗಿ ಮಾಡುವ ಕೆಲಸದ ಮೇಲೆ ಶ್ರದ್ಧೆ ಇತ್ತಂತೆ. "ನನಗೆ ನಮ್ಮಪ್ಪ ಶಿಸ್ತನ್ನು ಮೈಗೂಢಿಸಿದ್ದರು. ಅದು ಇವತ್ತಿನ ಬೆಳವಣಿಗೆಗೆ ಕಾರಣವಾಯಿತು. ನಾನು ಏನೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುತ್ತೇನೆ' ಎನ್ನುತ್ತಾರೆ ಚಂದ್ರು.
ಪ್ರಚಾರ ನನ್ನ ಪ್ಯಾಶನ್: ಚಂದ್ರು 10 ಸಿನಿಮಾಗಳನ್ನು ಪೂರೈಸಿದ್ದಾರೆ ನಿಜ. ಈ ಹತ್ತು ಸಿನಿಮಾಗಳ ಸಮದಯಲ್ಲೂ ಕೇಳಿಬಂದ ಒಂದು ಅಂಶವೆಂದರೆ ಚಂದ್ರು ಸಿನಿಮಾಕ್ಕೆ ಓಂಕಾರ ಬರೆದ ದಿನದಿಂದಲೂ ಅತಿಯಾದ ಪ್ರಚಾರ ಮಾಡುತ್ತಾರೆ, ಪಬ್ಲಿಸಿಟಿಗಾಗಿ ಗಿಮಿಕ್ ಮಾಡುತ್ತಾರೆ ಎಂದು. ಈ ಮಾತು ಚಂದ್ರು ಕಿವಿಗೂ ಬಿದ್ದಿದೆ. ಆದರೆ, ಚಂದ್ರುಗೆ ಈ ಬಗ್ಗೆ ಯಾವುದೇ ಬೇಸರವಿಲ್ಲ ಮತ್ತು ತಾವು ಮಾಡುತ್ತಿರುವ ಪ್ರಚಾರದ ಬಗ್ಗೆ ಖುಷಿ ಇದೆ.
"ಪ್ರಚಾರದ ವಿಚಾರದಲ್ಲಿ ನಾನು ಇಬ್ಬರನ್ನು ಫಾಲೋ ಮಾಡುತ್ತೇನೆ ಮತ್ತು ಅವರಿಂದ ಪ್ರೇರಿತನಾಗುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮ್. ತೆಲುಗಿನಲ್ಲಿ ರಾಜ್‌ಮೌಳಿ. ಪ್ರೇಮ್ ಸಿನಿಮಾ ಪ್ರಚಾರ ಮಾಡಿದ್ರೆ, ಹಿತಲ ಗಿಡ ಮದ್ದಲ್ಲ ಎಂಬಂತೆ ಗಿಮಿಕ್ ಎನ್ನುತ್ತಾರೆ. ಅದೇ ರಾಜ್‌ಮೌಳಿ ಸಿನಿಮಾ ಪ್ರಚಾರ ಮಾಡಿದ್ರೆ, "ವಾಟ್ ಎ ಪ್ಯಾಶನ್, ನಮ್ಮವರು ನೋಡಿ ಕಲಿಯಬೇಕು' ಎಂಬ ಮಾತು ಬರುತ್ತದೆ. ನಾನು ಸಿನಿಮಾ ಮಾಡೋದು ಜನರಿಗೆ. ನನ್ನ ಹೆಂಡತಿ, ಮಕ್ಕಳಿಗೆ ತೋರಿಸೋಕ್ಕಲ್ಲ. ನಾನು ಮಾಡಿದ ಸಿನಿಮಾವನ್ನು ಜನರಿಗೆ ತಲುಪಿಸೋದು ನನ್ನ ಕರ್ತವ್ಯ.
ಒಬ್ಬ ನಿರ್ಮಾಪಕ ನನ್ನನ್ನು ನಂಬಿ ಸಿನಿಮಾಕ್ಕೆ ದುಡ್ಡು ಹಾಕ್ತಾನೆ, ನನ್ನನ್ನು ಸಾಕ್ತಾನೆ ಅಂದ್ರೆ, ಆ ನಿರ್ಮಾಪಕನನ್ನು ಸೇಫ್ ಮಾಡುವ ಜವಾಬ್ದಾರಿ ಕೂಡಾ ನಿರ್ದೇಶಕನಿಗಿರುತ್ತದೆ. ಸದ್ಯ ನಮ್ಮಲ್ಲಿ ಸ್ಪರ್ಧೆ ಹೆಚ್ಚಿದೆ. ವಾರ ವಾರ ಸಿನಿಮಾಗಳು ಬರುತ್ತಿರುತ್ತವೆ. ನಮ್ಮ ಪ್ರಾಡಕ್ಟ್ ಅನ್ನು ಜನರಿಗೆ ತಲುಪಿಸಲು ನಾವು ಪ್ರಚಾರ ಮಾಡಲೇಬೇಕು. ನಾನು ಆ ಬಗ್ಗೆ ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನು ಚಂದ್ರು ಸ್ಟೈಲ್ ಅನ್ನಬಹುದು' ಎಂದು ಪ್ರಚಾರದ ಬಗ್ಗೆ ಮಾತನಾಡುತ್ತಾರೆ ಚಂದ್ರು.
ರೀಮೇಕ್-ಸ್ವಮೇಕ್ ಎಂಬ ಅಡ್ಡಗೋಡೆಯಿಲ್ಲ: ಎಂಟು ಸಿನಿಮಾಗಳನ್ನು ಸ್ವಮೇಕ್ ಮಾಡಿಕೊಂಡು ಬಂದ ಆರ್.ಚಂದ್ರು "ಲಕ್ಷ್ಮಣ' ಚಿತ್ರದ ಮೂಲಕ ರೀಮೇಕ್‌ಗೆ ಕೈ ಹಾಕಿದ್ದರು. ಸಹಜವಾಗಿಯೇ ಒಂದು ಪ್ರಶ್ನೆ ಬಂದಿತ್ತು, ಚಂದ್ರು ಮುಂದೆ ರೀಮೇಕ್ ಮಾಡುತ್ತಾರಾ ಎಂದು. ಈ ನಡುವೆಯೇ "ಕನಕ' ಬಗ್ಗೆಯೂ ರೀಮೇಕ್ ಮಾತು ಕೇಳಿಬಂದಿತ್ತು. ಆದರೆ, ಚಂದ್ರುಗೆ ರೀಮೇಕ್-ಸ್ವಮೇಕ್‌ನ ಅಡ್ಡಗೋಡೆಯಿಲ್ಲವಂತೆ.
"ಆರಂಭದಲ್ಲಿ ನನಗೂ ರೀಮೇಕ್-ಸ್ವಮೇಕ್ ಬಗ್ಗೆ ಬೇರೆಯದ್ದೇ ಭಾವನೆ ಇತ್ತು. ಸ್ವಮೇಕ್ ಮಾಡುವವರೆಲ್ಲ ಉತ್ತಮವರು ಎಂದಿತ್ತು. ಆದರೆ ಈಗ ಹಾಗಿಲ್ಲ. ದೊಡ್ಡ ದೊಡ್ಡ ಸ್ಟಾರ್‌ಗಳು ಕೂಡಾ ರೀಮೇಕ್ ಮಾಡ್ತಾರೆ. ಕ್ರಿಯೇಟಿವಿಟಿಗೆ ಯಾವತ್ತೂ ಅಡ್ಡಗೋಡೆ ಹಾಕಬಾರದು. ಏನೇ ಮಾಡುವುದಾದರೂ ನಮ್ಮ ಶೈಲಿಯಲ್ಲಿ ಮಾಡಬೇಕು. ಇನ್ನು ಮುಂದೆ ರೀಮೇಕ್-ಸ್ವಮೇಕ್ ಎಂಬ ಬೇಲಿ ಹಾಕಲ್ಲ' ಎನ್ನುತ್ತಾರೆ ಅವರು.
ಇದೇ ವೇಳೆ ಚಂದ್ರುಗೊಂದು ಖುಷಿ ಇದೆ. ಅದು ಅವರ ಚಿತ್ರಗಳ ಬಗ್ಗೆ ಕೇಳಿಬರುತ್ತಿರುವ ಕಾಮೆಂಟ್. "ಚಂದ್ರು ಸಿನಿಮಾ ಎಂದರೆ ಅದು ಸದಭಿರುಚಿಯ ಸಿನಿಮಾ ಎನ್ನುತ್ತಾರೆ. ನಮ್ಮ ನೆಲದ ವಾಸನೆ ಸಿನಿಮಾದಲ್ಲಿರುತ್ತದೆ ಎನ್ನುತ್ತಾರೆ. ಆ ಖುಷಿ ನನಗಿದೆ. ಮುಂದಿನ ಸಿನಿಮಾಗಳಲ್ಲೂ ಅದು ಕಾಣಸಿಗಲಿದೆ' ಎನ್ನುವುದು ಚಂದ್ರು ಮಾತು.
ನಿರ್ಮಾಣದ ಶಕ್ತಿ ಕೊಟ್ಟಿದ್ದಾರೆ: ಆರ್.ಚಂದ್ರು 10 ಸಿನಿಮಾಗಳನ್ನು ಪೂರೈಸಿದ್ದಾರೆ. ಆದರೆ, ಅವರು ಗಾಂಧಿನಗರದ ರೆಗ್ಯುಲರ್ ನಿರ್ಮಾಪಕರೊಂದಿಗೆ ಸಿನಿಮಾ ಮಾಡಿಲ್ಲ. ಯಾರೋ ಹೊಸ ನಿರ್ಮಾಪಕರ ಜೊತೆ ಅಥವಾ ತಮ್ಮದೇ ನಿರ್ಮಾಣದಲ್ಲಿ ಸಿನಿಮಾ ಮಾಡಿಕೊಂಡು ಬರುತ್ತಿದ್ದಾರೆ. ಹಾಗಾದರೆ ಚಂದ್ರುಗೆ ರೆಗ್ಯುಲರ್ ನಿರ್ಮಾಪಕರು ಸಿನಿಮಾ ಮಾಡುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ.
ಚಂದ್ರು ಹೇಳುವಂತೆ ಕನ್ನಡ ಚಿತ್ರರಂಗದ ರೆಗ್ಯುಲರ್ ನಿರ್ಮಾಪಕರಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. "ರಾಕ್‌ಲೈನ್ ಅವರಿಂದ ಹಿಡಿದು ಕೆ.ಪಿ.ಶ್ರೀಕಾಂತ್, ಶ್ರೀನಿವಾಸ್‌ರಂತಹ ನಿರ್ಮಾಪಕರು ಕೂಡಾ "ಯಾಕ್ ಚಂದ್ರು ನಮಗೆ ಸಿನಿಮಾ ಮಾಡಲ್ವ' ಎನ್ನುತ್ತಾರೆ. ಆದರೆ, ದೇವರ ದಯೆಯಲ್ಲಿ ಇವತ್ತು ನನ್ನ ಸಿನಿಮಾವನ್ನು ನಾನೇ ನಿರ್ಮಿಸುವಷ್ಟು ಶಕ್ತಿ ಬಂದಿದೆ.
ನನ್ನ ಕನಸುಗಳು ನನ್ನ ಖರ್ಚಲ್ಲೇ ಸಾಕಾರಗೊಳ್ಳಲಿ ಎಂಬ ಆಸೆ ಇದೆ. "ಕನಕ' ಚಿತ್ರಕ್ಕೆ ದೊಡ್ಡ ಬಜೆಟ್ ಆಗಿತ್ತು. ಏಕೆಂದರೆ ಅದು ನನ್ನ ಕನಸು. ಆ ಕನಸನ್ನು ನನ್ನ ಕಾಸಲ್ಲೇ ಈಡೇರಿಸಿದೆ. ಮುಂದೆಯೂ ನನ್ನ ಕನಸಿಗೆ ನನ್ನ ಕಾಸು ಖರ್ಚಾಗಲಿ ಎಂದು ಬೇಡುತ್ತೇನೆ. ಕೇವಲ ನನಗಾಗಿ ಸಿನಿಮಾ ನಿರ್ಮಾಣ ಮಾಡದೇ, ನನ್ನ ಜೊತೆಗಿದ್ದವರಿಗೂ ಸಿನಿಮಾ ನಿರ್ಮಿಸಿದ್ದೇನೆ. ಮುಂದೆಯೂ ನಿರ್ಮಿಸುತ್ತೇನೆ' ಎನ್ನುತ್ತಾರೆ.
ಐ ಲವ್ ಯೂ ಎಂಬ ಸುಂದರ ಕನಸು: ಸದ್ಯ ಆರ್.ಚಂದ್ರು ಉಪೇಂದ್ರ ಅವರಿಗೆ "ಐ ಲವ್ ಯೂ' ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ ಉಪ್ಪಿ ಜೊತೆ "ಬ್ರಹ್ಮ' ಸಿನಿಮಾ ಮಾಡಿದ್ದ ಚಂದ್ರು ಈಗ ಮತ್ತೂಮ್ಮೆ ಜೊತೆಯಾಗಿದ್ದಾರೆ. ಉಪೇಂದ್ರ ಈ ಹಿಂದೆ ತಮ್ಮ "ಎ' ಸಿನಿಮಾದಲ್ಲಿ, "ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದೆ°àಕಾಯಿ' ಎಂದಿದ್ದರು. ಆದರೆ, ಈಗ 15 ವರ್ಷಗಳ ನಂತರ ಉಪೇಂದ್ರ ಅವರು, ಅದೇ ಪ್ರೀತಿ ಬಗ್ಗೆ ಹೊಸ ಅಂಶವನ್ನು ಹೇಳಲಿದ್ದಾರಂತೆ.
"ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಭಿನ್ನವಾಗಿದೆ. ಈಗಿನ ಟ್ರೆಂಡ್ ಅಲ್ಲಿ ಉಪೇಂದ್ರ ಅವರು ಪ್ರೀತಿಯನ್ನು ಹೇಗೆ ನೋಡುತ್ತಾರೆ, ಪ್ರೀತಿ ಎಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಹೇಳಿದ್ದೇವೆ. ಆರಂಭದಲ್ಲಿ ಕಾಲೇಜು ಲವ್‌ಸ್ಟೋರಿಯಾಗಿರುವ ಸಿನಿಮಾ ಮುಂದೆ ಹೇಗೆ ಫ್ಯಾಮಿಲಿ ಎಂಟರ್‌ಟೈನರ್ ಆಗುತ್ತದೆ ಎಂಬ ಅಂಶ ಕೂಡಾ ಮಜಾವಾಗಿದೆ. "ಎ', "ಉಪೇಂದ್ರ', "ಪ್ರೀತ್ಸೆ' ಹಾಗೂ "ತಾಜ್‌ಮಹಲ್' ಚಿತ್ರಗಳ ಫ್ಲೇವರ್ ಇಲ್ಲಿರಲಿದೆ.
ಆ ಸಿನಿಮಾಗಳ ಅಂಶಗಳು ಒಂದು ಕಡೆಯಾದರೆ ಹೇಗಿರಬಹುದು ನೀವೇ ಯೋಚಿಸಿ' ಎನ್ನುವ ಚಂದ್ರು, "ನಾನು ಸಿನಿಮಾದಿಂದ ಸಿನಿಮಾಕ್ಕೆ ಭಿನ್ನ ಕಥೆಗಳನ್ನು ನೀಡುತ್ತಲೇ ಬಂದಿದ್ದೇನೆ. ಯಾವುದೇ ಒಂದು ಜಾನರ್‌ಗೆ ಸೀಮಿತವಾಗಿಲ್ಲ. ಸಿನಿಮಾವನ್ನು ತುಂಬಾನೇ ಪ್ರೀತಿಸಿ ಮಾಡುತ್ತೇನೆ. ನನ್ನ ಕಡೆಯಿಂದ ಸಿನಿಮಾಕ್ಕೇನು ಬೇಕೋ ಅದನ್ನು ನೀಡುತ್ತಲೇ ಬಂದಿದ್ದೇನೆ. ಈ ಬಾರಿಯೂ ಅದೇ ಶ್ರದ್ಧೆಯಿಂದ "ಐ ಲವ್ ಯೂ' ಮಾಡುತ್ತಿದ್ದೇನೆ. ಇದು ಕೂಡಾ ಅದ್ಧೂರಿ ಬಜೆಟ್‌ನ ಚಿತ್ರ. ದೊಡ್ಡ ತಾರಾಗಣವಿರಲಿದೆ' ಎನ್ನಲು ಮರೆಯುವುದಿಲ್ಲ
ಬರಹ: ರವಿಪ್ರಕಾಶ್ ರೈ