ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ಸಿಎಂ HDK ಅಣ್ಣನೇ ಕಾರಣವಂತೆ!
ಹಾಸನ:ಕಾಂಗ್ರೆಸ್ ಬಲಹೀನವಾಗಲು ಜೆಡಿಎಸ್ ದ್ವೇಷ ರಾಜಕಾರಣವೇ ಕಾರಣ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ಸಿಎಂ(ಎಚ್ ಡಿಕೆ) ಅಣ್ಣನೇ(ಎಚ್ ಡಿ ರೇವಣ್ಣ) ಕಾರಣ ಎಂದು ಮಾಜಿ ಸಚಿವ ಎ.ಮಂಜು ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರ ಸಕಲೇಶಪುರದ ಬಿಸಿಲೆ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಹೀನವಾಗುತ್ತಿದೆ. ಅದಕ್ಕೆ ಜೆಡಿಎಸ್ ದ್ವೇಷದ ರಾಜಕಾರಣವೇ ಕಾರಣ. ಸಿಎಂ ಕುಮಾರಸ್ವಾಮಿಯವರಿಗೆ ಬಹಿರಂಗ ಎಚ್ಚರಿಕೆ ಕೊಡುತ್ತಿದ್ದೇನೆ, ನಾವು ಇನ್ನೂ ದ್ವೇಷದ ರಾಜಕಾರಣ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ಹೀಗಾದರೆ ಕಾಂಗ್ರೆಸ್ ಕಾರ್ಯಕರ್ತರ ಗತಿಯೇನು ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಬಗ್ಗೆ ಪರೋಕ್ಷವಾಗಿ ಕಾಂಗ್ರೆಸ್ ನ ಹಲವು ಮುಖಂಡರು ಇಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.