ಆಟ ಆಡ್ಯಾರೆ ಮೈದಾನದ ಹೊರಗೂ!
ಯಾವುದೇ ವ್ಯಕ್ತಿಯ ವೈಯುಕ್ತಿಕ ಜೀವನದಲ್ಲಿ ಇಣುಕುವುದು ಮಹಾಪರಾಧ! ಅದರಲ್ಲೂ ಕ್ರಿಕೆಟಿಗರೇ ಕದ್ದುಮುಚ್ಚಿ ಖುಲ್ಲಾಂಖುಲ್ಲ ವ್ಯವಹರಿಸತೊಡಗಿದಾಗಲೇ ದೊಡ್ಡ ಸುದ್ದಿಯಾಗಿ ವಿವಾದಕ್ಕೆ ಕಾರಣರಾಗುತ್ತಾರೆ.
ಟೆಸ್ಟ್ ಕ್ರಿಕೆಟ್‌ನ ಅಗ್ರಸ್ಥಾನಿಯಾಗಿ ಭಾರತವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ನಾಲ್ಕನೇ ಪಂದ್ಯದಲ್ಲಿ ಸೋಲುಂಡಿತ್ತು. ಈ ವೇಳೆ ತಂಡದ ಸೋಲಿನ ಜತೆಗೆ ಕೋಚ್ ರವಿ ಶಾಸಿŒ ಬಾಲಿವುಡ್ ತಾರೆ ಸಿಮ್ರತ್ ಕೌರ್ ಜತೆಗೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸ್ಫೋಟಕ ಸುದ್ದಿಯೊಂದು ಹೊರಗೆ ಬಿತ್ತು. ಸೋಲಿನ ಜತೆಗೆ ಈ ವಿಷಯವೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸದ್ಯ ನಟಿ ಸಿಮ್ರತ್ ಕೌರ್ ನಮ್ಮ ನಡುವೆ ಏನೂ ಇಲ್ಲ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ರೋಮ್ಯಾನ್ಸ್ ವಿಚಾರದಲ್ಲಿ ವಿವಾದಕ್ಕೀಡಾದ ಕ್ರಿಕೆಟಿಗರ ಬಗೆಗಿನ ವಿವರ ಇಲ್ಲಿದೆ.
ಖುದ್ದು ರವಿಶಾಸ್ತ್ರಿ ಗೆ ಏರ್‌ಲಿಫ್ಟ್ ಸಿನೆಮಾ ಖ್ಯಾತಿಯ ಚಿತ್ರ ತಾರೆ ಸಿಮ್ರತ್ ಕೌರ್ ಜೊತೆ ಡೇಟಿಂಗ್ ವದಂತಿಗೂ ಮುನ್ನ 1986ರಲ್ಲಿ ಅಮೃತಾಸಿಂಗ್ ಜೊತೆ ಓಡಾಡಿದ್ದರು. ಪ್ರಸ್ತುತ 56 ವರ್ಷದ ರವಿ ಶಾಸ್ತ್ರಿ ಅವತ್ತೇ ಸ್ಪಷ್ಟಪಡಿಸಿದ್ದರು, ನಾನು ಪೂರ್ಣಾವಧಿಯಲ್ಲಿ ಮನೆಯನ್ನು ನಿರ್ವಹಿಸುವ ಮಡದಿಯನ್ನು ನಿರೀಕ್ಷಿಸುತ್ತೇನೆಯೇ ವಿನಃ ಹೀರೋಯಿನ್‌ಗಳನ್ನು ಮದುವೆಯಾಗುವುದಿಲ್ಲ. 1990ರಲ್ಲಿ ಅವರು ರಿತು ಎಂಬುವವರನ್ನು ಮದುವೆ ಆಗಿದ್ದರು. ಬಳಿಕ ವಿಚ್ಛೇದನವೂ ಆಗಿದೆ.
ಖಾತೆ ಆರಂಭಿಸಿದ ಪಟೌಡಿ!
ಇತಿಹಾಸದ ಗೂಗಲ್ ಡ್ರೆçವ್ ಓಪನ್ ಮಾಡಿದರೆ ಮೊದಲು ಕಾಣುವ ಹೆಸರು ಭಾರತದ ಅತಿ ಕಿರಿಯ ನಾಯಕ ಎಂಬ ದಾಖಲೆ ಹೊಂದಿರುವ ಮನ್ಸೂರ್ ಆಲಿ ಖಾನ್ ಪಟೌಡಿಯವರದ್ದು. 1960, 70ರ ದಶಕವನ್ನು ಅಕ್ಷರಶಃ ಆಳಿದ ಶರ್ಮಿಳಾ ಠಾಕೂರ್ ಅವರೊಂದಿಗೆ 4 ವರ್ಷ ಡೇಟಿಂಗ್ ನಡೆಸಿ 1969ರ ಡಿಸೆಂಬರ್ 27ರಂದು ಮದುವೆಯಾದರು. ಮದುವೆ ನಂತರವೂ ಶರ್ಮಿಳಾ ನಟನೆ ಬಿಡಲಿಲ್ಲ. ಅಪಘಾತದಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡ ಪಟೌಡಿ 70ರ ದಶಕದಲ್ಲಿಯೇ ಕ್ರಿಕೆಟ್‌ಗೆ ವಿದಾಯ ಹೇಳಿದರು. 2011ರಲ್ಲಿ ಈ ಮನುಷ್ಯ ಕೊನೆಯುಸಿರೆಳುವವರೆಗೂ ದಾಂಪತ್ಯ ಅಜೇಯವಾಗಿತ್ತು.
ಅಜರುದ್ದೀನ್, ಮ್ಯಾಚ್ ಫಿಕ್ಸಿಂಗ್, ಬಿರುಕು!
ಪಂದ್ಯಗಳಲ್ಲಿ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾದ, ಜನಮನ್ನಣೆಯಿಂದ ಲೋಕಸಭಾ ಸದಸ್ಯರೂ ಆದ ಮಹಮ್ಮದ್ ಅಜರುದ್ದೀನ್ ಒಂದರ್ಥದಲ್ಲಿ ಮ್ಯಾಚ್ ಫಿಕ್ಸಿಂಗ್ ಮೂಲಕವೇ ಚಿತ್ರನಟಿ ಸಂಗೀತಾ ಬಿಜಲಾನಿ ಅವರನ್ನು ನಿಖಾ ಮಾಡಿಕೊಂಡಿದ್ದು ಗಮನಾರ್ಹ ಸಂಗತಿ. ಜಾಹೀರಾತು ಶೂಟಿಂಗ್ ಸಂದರ್ಭದಲ್ಲಿ ಪರಿಚಿತರಾದ ಈ ಇಬ್ಬರು ಗಾಸಿಪ್‌ಗೆ ಸಿಕ್ಕಿದರು. ಇಬ್ಬರು ಪುತ್ರರಿದ್ದ ಮೊದಲ ಪತ್ನಿ ನೌರೀನ್‌ಗೆ ತಲಾಖ್ ನೀಡಿ ಅಜ್ಜು ಬಿಜಲಾನಿಯನ್ನು ಮದುವೆಯಾದರೂ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾರ ಸೌಂದರ್ಯದ ಬಿಜಿÉಗೆ ಅಜರುದ್ದೀನ್ ಮರುಳಾದದು, ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ದಾಂಪತ್ಯ ಬಾಳಲಿಲ್ಲ!
ಮನೋಜ್ ಪ್ರಭಾಕರ್ ರಿವರ್ಸ್ ಸ್ವಿಂಗ್!
ಭಾರತೀಯ ಕ್ರಿಕೆಟ್‌ನಲ್ಲಿ ಮನೋಜ್ ಪ್ರಭಾಕರ್‌ರದ್ದು ಒಂದು ರೀತಿಯ ಏಕಲವ್ಯ ಸಾಧನೆ. ಮಧ್ಯಮ ವೇಗಿಯಾಗಿ ತಂಡದಲ್ಲಿ ಸ್ಥಾನ ಪಡೆದು ಬ್ಯಾಟಿಂಗ್ ಪರಿಶ್ರಮದಿಂದ ಆರಂಭಿಕರಾಗಿ ಭಡ್ತಿ ಪಡೆಯುವ ಮಟ್ಟಿಗೆ ಬೆಳೆದ ಅವರ ರಿವರ್ಸ್ ಸ್ವಿಂಗ್ ಬೌಲಿಂಗ್ ಕೂಡ ಗಮನ ಸೆಳೆಯುತ್ತಿತ್ತು. ಆಕರ್ಷಕ ರೂಪ, ಬೌಲಿಂಗ್ ಶೈಲಿ ಎಂತವರನ್ನೂ ಸೆಳೆಯುವಂತಿತ್ತು. ಇಂತಿಪ್ಪ ವ್ಯಕ್ತಿಯೆಡೆ ಜಾನ್ ತೇರೆ ನಾಮ್, ಸೈನಿಕ್ ಮೊದಲಾದ ಜನಪ್ರಿಯ ಚಿತ್ರಗಳ ನಟಿ ಮಾರು ಹೋಗುವುದು ತೀರಾ ವಿಚಿತ್ರವೇನಲ್ಲವಲ್ಲವೇ? 1984ರಿಂದ 96ರವರೆಗೆ ಕ್ರಿಕೆಟ್ ಆಡಿದ ಮನೋಜ್ ಅಜ್ಜು ವಿರುದ್ಧ ಮೊದಲ ಬಾರಿಗೆ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದವರು. ಕೊನೆಗೆ ಅದೇ ಉರುಳಲ್ಲಿ ಅವರೂ ಸಿಲುಕಿದ್ದು ವಿಪರ್ಯಾಸ. ಇದರ ಜೊತೆ ಮೊದಲ ಪತ್ನಿಯೊಂದಿಗಿನ ಸಂಬಂಧಕ್ಕೂ ಕೊಕ್ ಕೊಡಬೇಕಾಯಿತು. 1997ರಲ್ಲಿ ಅವತ್ತಿನ ಹೀರೋಯಿನ್ ಫರೀನ್‌ರನ್ನು ವರಿಸಿದ ಮನೋಜ್ ಪ್ರಭಾಕರ್ ಇಬ್ಬರು ಪುತ್ರರ ಜೊತೆ ದೆಹಲಿಯಲ್ಲಿ ಸಂಸಾರ ನಡೆಸಿದ್ದಾರೆ.
ಗ್ಲಾಮರ್ ಸ್ಪಿನ್‌ಗೆ ಕೊಹ್ಲಿ, ಹರ್ಭಜನ್, ಜಹೀರ್ ಬಲಿ!
2015ರಿಂದ ಬಾಲಿವುಡ್ ಹಾಗೂ ಇತರ ಭಾಷೆಯ ನಟಿಯರ ಕಣ್ಣೋಟದ ಸ್ಪಿನ್‌ಗೆ ಬಲಿಯಾಗುವ ಆಟಗಾರರ ಸಂಖ್ಯೆ ಹೆಚ್ಚುತ್ತಿದೆ. ಹರ್‌ಭಜನ್ ಸಿಂಗ್ ನಟಿ ಗೀತಾ ಬಾತ್ರಾ ಎದುರು ನಿರುತ್ತರರಾದರೆ, ಜಹೀರ್‌ಖಾನ್ ಸಾಗರಿಕಾ ಘಾಟೆ ಪಾಲಾದರು. ಸಿಕ್ಸರ್ ವೀರ ಯುವರಾಜ್ ಸಿಂಗ್ ಹಜೆಲ್ ಕೀಚ್ ಎಂಬ ಬ್ರಿಟಿಷ್ ಮಾಡೆಲ್, ಬಾಲಿವುಡ್ ನಟಿಯ ಕುತ್ತಿಗೆಗೆ ತಾಳಿ ಕಟ್ಟಿದರು. ತಾಜಾವಾಗಿ ಕ್ರಿಕೆಟ್ ಬಾಲಿವುಡ್ ಸಂಬಂಧ ಮುಂದುವರೆಸಿದ್ದು ಭಾರತದ ನಾಯಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಗೆ ಮಾರು ಹೋಗಿದ್ದು ಜಗಜ್ಜನಿತ!
ಹಿಂದಿ ಚಿತ್ರರಂಗದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ನೀನಾ ಗುಪ್ತ ಭಾರತಕ್ಕೆ ಟೆಸ್ಟ್ ಪ್ರವಾಸಕ್ಕೆ ಬಂದಿದ್ದ ವೆಸ್ಟ್‌ಇಂಡೀಸ್ ನಾಯಕ ವಿವಿಯನ್ ರಿಚರ್ಡ್ಸ್‌ರನ್ನು ಮೆಚ್ಚಿದರು. ಹಿಟ್‌ವಿಕೆಟ್ ಆಗಿದ್ದು ನೀನಾ! ಮಸಾಬಾ ಎಂಬ ಮಗಳನ್ನು ಪಡೆದರೂ ಅದಾಗಲೇ ಮದುವೆಯಾಗಿದ್ದ ವಿವ್ ಜೊತೆ ಅಧಿಕೃತ ವಿವಾಹ ಸಾಧ್ಯವಾಗಲೇ ಇಲ್ಲ. ಟಿವಿ ಸೀರಿಯಲ್ ನಿರ್ದೇಶನ, ನಟನೆಗಳನ್ನು ನಡೆಸಿದರೂ ಯಶಸ್ಸು ಕಾಣದ ನೀನಾ 2008ರಲ್ಲಿ ದೆಹಲಿಯ ಚಾರ್ಟಡ್ ಅಕೌಂಟೆಂಟ್ ವಿವೇಕ್ ಮೆಹ್ರಾರನ್ನು ವರಿಸಿದರು. ಈಗ ವಿವ್ ಮಗಳಿಗೂ ಮದುವೆಯಾಗಿದೆ!
ಫಲಿತಾಂಶ ಕಾಣದ ಪಂದ್ಯಗಳು!
ಜನಪ್ರಿಯತೆ ವಿಚಾರದಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ಹಿರೋಯಿನ್‌ಗಳು ಸವ್ವಾಸೇರು ಹಾಕುವಂತಿದ್ದಾರೆ. ಇದೇ ಕಾರಣದಿಂದ ಪಾರ್ಟಿಗಳಲ್ಲಿ, ಜಾಹೀರಾತು ಶೂಟಿಂಗ್‌ಗಳಲ್ಲಿ ಇವರು ಪದೇ ಪದೆ ಎದುರಾಗುತ್ತಾರೆ. ಆವಾಗಿನ ಆಕರ್ಷಣೆಯಿಂದ ಕೆಲ ದಿನಗಳ ಕ್ರಷ್ ಕಾಣುತ್ತಲೇ ಇದ್ದೇವೆ. ವೇಗಿ ಶ್ರೀಶಾಂತ್ ಬೆಂಗಾಳಿ ರಿಯಾ ಸೇನ್ ಪಾರ್ಟಿಗಳಲ್ಲಿ ಮಿಂಚಿದರು. ಸೌರವ್ ಗಂಗೂಲಿ ಹಾಗೂ ನಗ್ಮಾ ಗಾಸಿಪ್‌ಗೆ ತುತ್ತಾಗಿದ್ದರು. ಸಾಗರಿಕಾ ಘಾಟೆಯವರನ್ನು ವಿವಾಹವಾಗುವ ಮುನ್ನ 8 ವರ್ಷಗಳ ಕಾಲ ನಟಿ ಇಶಾ ಶರ್ವಾನಿ ಜೊತೆ ಜಹೀರ್‌ಖಾನ್‌ರ ಜೊತೆಯಾಟ ನಡೆದಿತ್ತು. ಯುವರಾಜ್‌ಸಿಂಗ್ ಕೂಡ ಬಾಲಿವುಡ್‌ನ ನಟಿಯರಾದ ಕಿಂ ಶರ್ಮ, ದೀಪಿಕಾ ಪಡುಕೋಣೆ ಅವರ ಸಂಗಡ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಇವರಿಬ್ಬರಿಗೂ ಅಂತಿಮವಾಗಿ ಗ್ಲಾಮರ್ ಮಡದಿಯರೇ ಸಿಕ್ಕರು!
ಪಾಕಿಯರ ಇನಿಂಗ್ಸ್!
ಪಾಕಿಸ್ತಾನಿಯರಿಗೆ ಹಿಂದಿ ಚಿತ್ರಗಳೆಂದರೆ ಪಂಚಪ್ರಾಣ. ಅಲ್ಲಿನ ಆಟಗಾರರು ಇಲ್ಲಿನ ಹೀರೋಯಿನ್‌ಗಳತ್ತ ಅಯಸ್ಕಾಂತ. 60, 70ರ ದಶಕದಲ್ಲಿ ಪಾಕ್‌ನ ಮೊಹ್ಸಿನ್‌ಖಾನ್ ಗರಿಷ್ಠ ಅಫೇರ್‌ಗಳಿಂದಲೇ ಖ್ಯಾತರಾದ ಹಿಂದಿ ನಟಿ ರೀನಾರಾಯ್‌ರನ್ನು ವರಿಸಿದರು. ಖುದ್ದು ಮೊಹ್ಸಿನ್ ನಂತರದ ದಿನಗಳಲ್ಲಿ ಚಿತ್ರನಟನೆ ಮಾಡಿದರು. ನಟನೆ ಬೇರೆ, ವಾಸ್ತವ ಬೇರೆ. ದಾಂಪತ್ಯ ವಿಪರೀತ ವಿವಾದಗಳನ್ನು ಸೃಷ್ಟಿಸಿ ವಿಚ್ಛೇದನೆಯಲ್ಲಿ ಕೊನೆಯಾಯಿತು. ವಾಸೀಂ ಅಕ್ರಂ ಹಾಗೂ ಸುಷ್ಮಿತಾ ಸೇನ್, ಜೀನತ್ ಅಮಾನ್ ಹಾಗೂ ಇಮ್ರಾನ್ ಖಾನ್ ಜೊತೆಯಾಟಗಳು ದೀರ್ಘ ಕಾಲ ಬಾಳಲಿಲ್ಲ ಎಂಬುದು ಸತ್ಯ. ಚರಿತ್ರೆಯಲ್ಲಿ ಇಂತಹ ಹಲವು ಉದಾಹರಣೆಗಳಿವೆ.
ಮಾ.ವೆಂ.ಸ.ಪ್ರಸಾದ್