ಸಂಗೀತದಿಂದ ಅಂತರಂಗ ಸೌಂದರ್ಯ ಹೆಚ್ಚಳ
ಯಲ್ಲಾಪುರ: ದೃಗ್ಗೊಚರ ಗಾನ ಕಾರ್ಯಕ್ರಮವನ್ನು ನಟ ನೀರ್ನಳ್ಳಿ ರಾಮಕೃಷ್ಣ ಉದ್ಘಾಟಿಸಿದರು.
ಯಲ್ಲಾಪುರ: ಸಂಗೀತ ಬದುಕಿನ ಸೂಕ್ಷ್ಮವಾದ ಚಲನಶೀಲ ಗುಣವನ್ನು, ಅಂತರಂಗದ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ. ಸಂಗೀತದ ಕಲೆ ಗೌರವಯುತವಾದ ಕಲೆಯಾಗಿ ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಒಬ್ಬ ಕಲಾವಿದ
ಬೆಳೆಯಬೇಕಾದರೆ ಸುತ್ತ ಮುತ್ತಲಿನ ಪರಿಸರವೂ ಪೂರಕವಾಗಿರಬೇಕು ಎಂದು ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಹೇಳಿದರು.
ಅವರು ತಾಲೂಕಿನ ಹೊನಗದ್ದೆ ವೀರಭದ್ರ ದೇವಾಲಯದ ಆವರದಲ್ಲಿ ವೈದ್ಯ ಹೆಗ್ಗಾರಿನ ಸಾಧನಾ ಸಂಸ್ಕೃತಿಕ ನಿಕ್ಷೇಪ ಹಾಗೂ ವೀರಭದ್ರ ದೇವಾಲಯ ಆಡಳಿತ ಮಂಡಳಿ ಹೊನಗದ್ದೆ, ತೇಲಂಗಾರಿನ ಮೈತ್ರಿ ಕಲಾ ಬಳಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ದೃಗ್ಗೊಚರ ಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮನ್ನು ನಾಟಕದ ರಂಗಭೂಮಿಯಿಂದ ಸಿನೆಮಾಕ್ಕೆ ಡಾ| ರಾಜಕುಮಾರ್ ಪರಿಚಯಿಸಿದರು. ಬಬ್ರುವಾಹನ ತಮ್ಮ ಮೊದಲ ಪಾತ್ರ ಎಂದು ನೆನಪು ಮಾಡಿಕೊಂಡ ನೀರ್ನಳ್ಳಿ ರಾಮಕೃಷ್ಣ ಪ್ರೇಕ್ಷಕರ ಒತ್ತಾಯದ ಮೇರಗೆ ಚಲನ ಚಿತ್ರಗೀತೆಯೊಂದನ್ನು ಹಾಡಿ ಮನರಂಜಿಸಿದರು.
ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ ಮಾತನಾಡಿ, ಅಂತರಂಗದ ಅಲಂಕಾರವು ಸಂಸ್ಕೃತಿ ಸಂಸ್ಕಾರದಿಂದ ಮಾತ್ರ ಸಿದ್ಧಿಗೊಳ್ಳಲಿದೆ. ಸಂಗೀತದ ಮೂಲಕ ಹೊಸ ಚೈತನ್ಯ ಪಡೆಯಲು ಸಾಧ್ಯವಿದೆ. ಅಭಿವ್ಯಕ್ತಿಯ ಮಾಧ್ಯಮ ಭಿನ್ನವಾಗಿದ್ದರೂ ಭಾವನೆಗಳ ಮೂಲ
ಒಂದೇ ಎಂದರು. ಸ್ನೇಹಸಾಗರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಲ್. ಭಟ್ಟ ಅಧ್ಯಕ್ಷತೆ ವಹಿಸಿ, ಕಲಾವಿದನಿಗೆ ಅವರವರ ಊರಿನಲ್ಲಿ
ಸಿಗುವ ಮನ್ನಣೆ ಎಲ್ಲಾ ಪ್ರಶಸ್ತಿಗಳಿಗಿಂತ ದೊಡ್ಡದು ಎಂದರು.
ಜೈರಾಮ ಹೆಗಡೆ ಉಪಸ್ಥಿತರಿದ್ದರು. ಪಶುವೈದ್ಯ ಕೆ.ಜಿ. ಹೆಗಡೆಯವರನ್ನು ಸನ್ಮಾನಿಸಲಾಯಿತು. ಶಾರದಾ ಕಿರಗಾರೆ, ಗಾಯತ್ರಿ ಗಾಂವಾರ, ಅವಿನಾಶ ಕೋಮಾರ, ತಮ್ಮಣ್ಣ ಭಟ್ಟರನ್ನು ಅಭಿನಂದಿಸಲಾಯಿತು. ಡಿ.ಜಿ. ಭಟ್ಟ ದುಂಡಿ ಸ್ವಾಗತಿಸಿದರು. ಪ್ರಸನ್ನ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಡಾ| ದತ್ತಾತ್ರಯ ಗಾಂವಾರ ನಿರೂಪಿಸಿದರು. ಬಾಲಸುಬ್ರಹ್ಮಣ್ಯ ವಂದಿಸಿದರು.