NSGಗೆ ಫೋನ್ ಮಾಡಿ ಮೋದಿ ದಾಳಿ ಎಚ್ಚರಿಕೆ: ಮುಂಬಯಿ ವ್ಯಕ್ತಿ ಅರೆಸ್ಟ್
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿಯ ಎಚ್ಚರಿಕೆ ನೀಡಿ ಎನ್‌ಎಸ್‌ಜಿ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದ 22ರ ಹರೆಯದ ಮುಂಬಯಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಕಾಶೀನಾಥ್ ಮಂಡಲ್ ಎಂಬ ವ್ಯಕ್ತಿಯನ್ನು ಮಧ್ಯ ಮುಂಬಯಿಯ ಡಿಬಿ ಮಾರ್ಗ್ ಪೊಲೀಸರು ಕಳೆದ ಜು.27ರಂದು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಯುವ ಎಚ್ಚರಿಕೆಯ ಕರೆ ಬಂದಿದ್ದ ನಂಬರ್ ನ ಮೂಲವನ್ನು ಶೋಧಿಸಿದ ಎನ್‌ಎಸ್‌ಜಿ ಕಂಟ್ರೋಲ್ ರೂಮ್ ಅಧಿಕಾರಿಗಳು ಒಡನೆಯೇ ಮುಂಬಯಿ ಪೊಲೀಸರಿಗೆ ಫೋನ್ ಮಾಡಿ ಆರೋಪಿಯನ್ನು ಬಂಧಿಸುವಂತೆ ಸೂಚಿಸಿದ್ದರು.
ಎನ್‌ಎಸ್‌ಜಿಗೆ ಫೋನ್ ಕರೆ ಮಾಡಿದ್ದ ವ್ಯಕ್ತಿ ಮಂಡಲ್ ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿದರು. ಮೂಲತಃ ಜಾರ್ಖಂಡ್ ನವನಾದ ಮಂಡಲ್ ಮುಂಬಯಿಯ ವಾಲ್ಕೇಶ್ವರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದ.
ಮಂಡಲ್ ಸೂರತ್ ಗೆ ಹೋಗುವ ಟ್ರೈನ್ ಹತ್ತಲು ಮುಂಬಯಿ ಸೆಂಟ್ರಲ್ ರೈಲ್ವೇ ಸ್ಟೇಶನ್‌ಗೆ ಬಂದಿದ್ದಾಗ ಆತನನ್ನು ಪೊಲೀಸರು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಮಂಡಲ್ ನನ್ನು ಪ್ರಶ್ನಿಸಿದ ಅಧಿಕಾರಿಗಳಲ್ಲಿ ಆತ, "ನನ್ನ ಸ್ನೇಹಿತನೊಬ್ಬ ಈಚೆಗೆ ಜಾರ್ಖಂಡ್‌ನಲ್ಲಿ ನಕ್ಸಲ್ ದಾಳಿಯಲ್ಲಿ ಮೃತಪಟ್ಟಿದ್ದ ; ಈ ವಿಷಯದಲ್ಲಿ ನಾನು ಪ್ರಧಾನಿಯನ್ನು ಕಾಣಲು ಬಯಸಿದ್ದೆ' ಎಂದು ಹೇಳಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೋರ್ಟ್ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.