ಪುಣಚಪ್ಪಾಡಿ: ಸಂಚಾರಿ ಆರೋಗ್ಯ ಸೇವೆ ಆರಂಭ
ಸವಣೂರು: ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಣಚಪ್ಪಾಡಿ ಗ್ರಾಮದಲ್ಲಿ ಸಂಚಾರಿ ಆರೋಗ್ಯ ಸೇವೆ ಶುಕ್ರವಾರ ಆರಂಭವಾಗಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವೈದ್ಯರು ಹಾಗೂ ಸಿಬಂದಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು.
ಪುಣಚಪ್ಪಾಡಿ ಗ್ರಾಮದಲ್ಲಿ ವಿವಿಧ ಕಾರಣಗಳಿಂದ ಹಲವರು ಅಕಾಲಿಕ ಮರಣಹೊಂದಿರುವ ಕುರಿತು "ಉದಯವಾಣಿ' ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಬಳಿಕ ಆರೋಗ್ಯ ಇಲಾಖೆಯು ಗ್ರಾಮದಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿತ್ತು. ಗ್ರಾಮದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಿರುವ ಕುರಿತೂ ವರದಿಯಲ್ಲಿ ಉಲ್ಲೇಖೀಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ಪುಣಚಪ್ಪಾಡಿ ಗ್ರಾಮದ ಕುರಿತು ಜಿಲ್ಲಾಧಿ ಕಾರಿಗಳಿಂದ ವರದಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಜಿಲ್ಲೆಯಲ್ಲಿಯೇ ಹೆಚ್ಚು ಪ.ಜಾ., ಪ.ಪಂ.ದ ಕುಟುಂಬಗಳೂ ಈ ಗ್ರಾಮದಲ್ಲಿ ಇವೆ.
ಮುಂದೆ ವಾರದಲ್ಲಿ ಒಂದು ದಿನ ನಿಗದಿ ಮಾಡಿ ಗ್ರಾಮದ ಜನತೆಯ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.