ಮದ್ವೆ ಆದವರಿಗೇ ಜೀವನದಲ್ಲಿ ಹೆಚ್ಚು ಖುಷಿ!
ಇನ್ನೂ ಮದ್ವೆ ಆಗದವರ ಬಳಿ ಮದ್ವೆ ಯಾವಾಗ ಅಂತ ಕೇಳಿ ನೋಡಿ! ಮುಖ ತಾವರೆಯಂತೆ ಅರಳುತ್ತದೆ. ಮದ್ವೆ ವಿಚಾರ ಹೇಳಿದ್ರೇ ಹೀಗೆ. ಇನ್ನು ಮದ್ವೆ ಆದ್ರೆ? ಜೀವನ ಪೂರ್ತಿ ಖುಷಿ ಖುಷಿ. ಹಾಗಂತ ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ಪ್ರಕಾರ ವಿವಾಹಿತರಿಗೆ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತದಂತೆ. ಜೊತೆಗೆ ಅವರಿಗೆ ಮಾನಸಿಕ ಕ್ಲೇಶಗಳೂ ಕಡಿಮೆ ಎಂದು ಹೇಳಲಾಗಿದೆ. ಸಮೀಕ್ಷೆಗಾಗಿ 572 ಮಂದಿಯನ್ನು ಸಂದರ್ಶಿಸಲಾಗಿದೆ.
ಸಮೀಕ್ಷೆಯಲ್ಲಿ ವಿವಾಹಿತರಿಗೆ ಮಾನಸಿಕ ಉದ್ವೇಕ, ಒತ್ತಡದ ಭಾವನೆಗಳು ತೀವ್ರ ಕಡಿಮೆಯಿರುವುದು ಪತ್ತೆಯಾಗಿದೆ. ಜೊತೆಗೆ ಅವರು ಹೆಚ್ಚು ಶಾಂತ ಚಿತ್ತರಾಗಿದ್ದುದು ಪತ್ತೆಯಾಗಿದೆ. ದಂಪತಿ ಮಧ್ಯೆ ವಿಚಾರಗಳನ್ನು ಹಂಚಿಕೊಳ್ಳುವ ಕ್ರಮ ರೂಢಿಯೂ ಆಗಿರುವುದರಿಂದ ಅವರು ಹೆಚ್ಚು ಅರ್ಥಗರ್ಭಿತರಾಗಿ ಯೋಚನೆಯೂ ಮಾಡುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಮನಃಶಾಸ್ತ್ರ ಕುರಿತ ನಿಯತಕಾಲಿಕೆಯಲ್ಲಿ ಈ ಸಮೀಕ್ಷೆ ಪ್ರಕಟಗೊಂಡಿದೆ. ವಿವಾಹಿತರ ದೇಹದಲ್ಲಿ ಹೆಚ್ಚು ಒತ್ತಡ ಉಂಟುಮಾಡುವ ಹಾರ್ಮೋನ್ ಮೇಲೆ ನಿಯಂತ್ರಣ ಹೇರುವ ಗುಣವೂ ಕಂಡು ಬಂದಿದೆಯಂತೆ. ವಿವಾಹಿತರಾದ ಬಳಿಕವೇ ಹಲವರಲ್ಲಿ ಇದು ಗುರುತಿಸುವಂತೆ ಇದ್ದು, ಒತ್ತಡ ಕಡಿಮೆ ಮಾಡಲು ವಿವಾಹ ನಿಜಕ್ಕೂ ನೆರವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಫಲಿತಗಳು...
ವಿವಾಹಿತರಲ್ಲಿ ಮಾನಸಿಕ ಒತ್ತಡ ಕಡಿಮೆ, ಹೆಚ್ಚು ಖುಷಿ!
ವಿವಾಹಿತರ ದೇಹದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆ ಪ್ರಮಾಣ ಕಡಿಮೆ
ವಿವಾಹಿತರು ಹೆಚ್ಚು ಅರ್ಥಗರ್ಭಿತರಾಗಿ ಆಲೋಚಿಸಬಲ್ಲರು!